KLE ಕನ್ನಡ ಮಾಧ್ಯಮ ಶಾಲೆಗಳ ಡಿಸೆಂಬರ್ ಚಟುವಟಿಕೆ – ಹೊರೆಯನ್ನು ಹಂಚಿಕೊಳ್ಳಿ
ಉದ್ದೇಶಗಳು
- ವಿದ್ಯಾರ್ಥಿಗಳಿಗೆ ಮನೆಯಲ್ಲಿ ಜವಾಬ್ದಾರಿ ಹಂಚಿಕೆಯ ಪ್ರಾಮುಖ್ಯತೆಯನ್ನು ಗುರುತಿಸಲು ಸಾಧ್ಯವಾಗುತ್ತದೆ.
- ಲಿಂಗಸಮಾನತೆಯು ಮೊದಲು ಮನೆಯಲ್ಲಿ ಪ್ರಾರಂಭವಾಗಿ ನಂತರ ಸಮಾಜಕ್ಕೆ ಹೋಗುತ್ತದೆ ಎಂಬುದನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
ಫಲಿತಾಂಶಗಳು
- ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮಹತ್ವವನ್ನು ತಮ್ಮದೇ ಮಾತಿನಲ್ಲಿ ವ್ಯಾಖ್ಯಾನಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
- ತಾವು ಮನೆಯಲ್ಲಿ ಮನೆಗೆಲಸಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ವಿದ್ಯಾರ್ಥಿಗಳು ವಿವರಿಸುತ್ತಾರೆ.
ಕೌಶಲ್ಯಗಳು ಮತ್ತು ಮೌಲ್ಯಗಳು
ಕೌಶಲ್ಯಗಳು - ಸಂವಹನ, ಸಹಯೋಗ ಮತ್ತು ಸೃಜನಶೀಲತೆ
ಮೌಲ್ಯಗಳು - ಸಮಾನತೆ
ಸೆಶನ್ಗಳ ಅವಲೋಕನ
ಕ್ರ. ಸಂ | ಸೆಶನ್ ವಿವರಗಳು | ಬೇಕಾದ ಅಂದಾಜು ಸಮಯ |
1 | ಹಂತ 1: ಪರಿಚಯ
ಹಂತ 2: ಪಾತ್ರಾಭಿನಯ ಹಂತ 3: ವಿವರಣೆ |
45 ನಿಮಿಷಗಳು |
ಬೇಕಾದ ಸಾಮಗ್ರಿಗಳು
ನೋಟ್‌ಬುಕ್ ಗಳು, ಪೆನ್ ಗಳು
ಚಟುವಟಿಕೆಯ ಹಂತಗಳು
ಸೆಷನ್ 1: 45 ನಿಮಿಷಗಳ ಸೆಶನ್‌ನ ಹಂತ 1-3
ಹಂತ 1 - ಪರಿಚಯ
ಸಮಯ: 10-12 ನಿಮಿಷಗಳು
ಪರಿಚಯ ಸೆಶನ್ ಅನ್ನು ಬಳಸಿಕೊಂಡು ಆ ದಿನದ ವಿಷಯವನ್ನು ತರಗತಿಯಲ್ಲಿ ಪರಿಚಯಿಸಿ
ನಾಟಕದಲ್ಲಿ ಪಾತ್ರ ನಿರ್ವಹಿಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಅವರು ಅನುಬಂಧ 1 ರಲ್ಲಿ ನೀಡಿರುವ ಸ್ಕ್ರಿಪ್ಟ್ ಅನ್ನು ಹಂಚಿ ಅವರು ತಯಾರಾಗಲು 10 ನಿಮಿಷಗಳ ಸಮಯವನ್ನು ನೀಡುತ್ತಾರೆ.
ಪಾತ್ರ ಪಟ್ಟಿ:
- ಅಮ್ಮ
- ಅಪ್ಪ
- ಮಗ
- ಮಗಳು
- ಅಜ್ಜ
- ಅಜ್ಜಿ
ಗಮನಿಸಿ:ಶಿಕ್ಷಕರು ಪಾತ್ರಗಳನ್ನು ಗುರುತಿಸಿ ತರಗತಿಯಲ್ಲಿ ಪಾತ್ರಾಭಿನಯವನ್ನು ಪ್ರಸ್ತುತಪಡಿಸಲು ಅವರನ್ನು ಸಿದ್ಧಗೊಳಿಸುವ ಕಾರ್ಯವನ್ನೂ ಮಾಡಬಹುದು
ಅಥವಾ ಶಿಕ್ಷಕರು ವೀಡಿಯೋ ತೋರಿಸಬಹುದು
ಹಂತ 2– ಪಾತ್ರ (ರೋಲ್ ಪ್ಲೇ) ಅಥವಾ ವಿಡಿಯೋ
ಬೇಕಾದ ಅಂದಾಜು ಸಮಯ: 30 ನಿಮಿಷಗಳು.
1. ವಿದ್ಯಾರ್ಥಿಗಳಿಗೆ ಪಾತ್ರಾಭಿನಯವನ್ನು ಪ್ರಸ್ತುತಪಡಿಸುವಂತೆ ಶಿಕ್ಷಕರು ಗುಂಪಿಗೆ ಹೇಳುತ್ತಾರೆ,
ಅಥವಾ
ಬದಲಾಗಿ, ಸಂಪನ್ಮೂಲಗಳು ಲಭ್ಯವಿದ್ದರೆ,ಶಿಕ್ಷಕರು ಕೆಳಗೆ ಕೊಟ್ಟಿರುವ ವೀಡಿಯೋವನ್ನು ಪ್ರಸ್ತುತಪಡಿಸುತ್ತಾರೆ.
https://www.youtube.com/watch?v=8QDlv8kfwIM
https://www.youtube.com/watch?time_continue=7&v=wJukf4ifuKs&feature=emb_logo
2. ನಂತರ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾರೆ.
- ಪಾತ್ರಾಭಿನಯ/ವೀಡಿಯೋದಲ್ಲಿ ನೀವೇನು ಗಮನಿಸಿದಿರಿ?
- ನಾಟಕದಲ್ಲಿ ನೀವು ಮಗಳು ಹೇಳಿರುವುದನ್ನು ಒಪ್ಪುತ್ತೀರಾ? ಅಥವಾ ವೀಡಿಯೊದಲ್ಲಿನ ಸ್ತ್ರೀ ಪಾತ್ರಗಳು ಹೇಳಿರುವುದನ್ನು ಒಪ್ಪುತ್ತೀರಾ?
- ನಿಮ್ಮ ಕುಟುಂಬದವರೊಡನೆ ನೀವು ಕೆಲಸವನ್ನು ಹಂಚಿಕೊಳ್ಳುತ್ತೀರಾ?
- ನಿಮ್ಮ ಮನೆಯಲ್ಲಿ ಮನೆಗೆಲಸಗಳನ್ನು ನೀವ್ಯಾಕೆ ಮಾಡಬೇಕು?
3. ಮನೆಕೆಲಸಗಳನ್ನು ಹಂಚಿಕೊಳ್ಳುವುದರಿಂದ ಉಂಟಾಗುವ ಪ್ರಯೋಜನವನ್ನು ಸೆಶನ್‌ನ ಕೊನೆಯಲ್ಲಿ ಚರ್ಚಿಸಿ. ಇವುಗಳಲ್ಲಿ ಮೂರು ಪ್ರಮುಖವಾದವುಗಳೆಂದರೆ:
- ಕೌಟುಂಬಿಕ ಮೌಲ್ಯಗಳ ತಿಳುವಳಿಕೆ ಬಲವಾಗುತ್ತದೆ ಮತ್ತು ಇದರಿಂದ ಬಾಂಧ್ಯವ್ಯ ವೃದ್ಧಿಗೊಂಡು ಕುಟುಂಬ ಸದಸ್ಯರಲ್ಲಿ ಪರಸ್ಪರ ಗೌರವ ಹೆಚ್ಚಾಗುತ್ತದೆ.
- ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣ ಕುಟುಂಬವು ಉತ್ತಮವಾಗಿ ಸಿದ್ಧವಾಗುತ್ತದೆ.
- ಜವಾಬ್ದಾರಿಗಳನ್ನು ಹಂಚಿಕೊಳ್ಳುವುದರಿಂದ ಉಂಟಾಗುವ ಅತ್ಯಂತ ಮಹತ್ವದ ಪ್ರಯೋಜನವೆಂದರೆ ಕುಟುಂಬದ ಪ್ರತಿ ಸದಸ್ಯರು ಮನೆಯಲ್ಲಿ ಖುಷಿಯಿಂದ ಇರುತ್ತಾರೆ
ಹಂತ 3 - ಚಟುವಟಿಕೆಯ ವಿವರಣೆ
ಸಮಯ: 5-7 ನಿಮಿಷ
ಚಟುವಟಿಕೆಗಳನ್ನು ವಿವರಿಸಲು ವಿದ್ಯಾರ್ಥಿಗಳಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ
- ಈ ಚಟುವಟಿಕೆಯಿಂದ ನೀವು ಏನು ಕಲಿತಿದ್ದೀರಿ?
- ಮನೆಗೆಲಸದ ಹೊರೆಯನ್ನು ಕಡಿಮೆ ಮಾಡಲು ನೀವೇನು ಕ್ರಮವನ್ನು ತೆಗೆದುಕೊಳ್ಳುತ್ತೀರಿ?
- ಮನೆಕೆಲಸದ ಹೊರತಾಗಿ ನಿಮ್ಮ ಸುತ್ತಲೂ ಲಿಂಗ ಅಸಮಾನತೆಯನ್ನು ನೀವು ಎಲ್ಲಿ ನೋಡುತ್ತೀರಿ?
ಹೋಮ್‌ವರ್ಕ್:
ವಿದ್ಯಾರ್ಥಿಗಳಿಗೆ ಮನೆಯಲ್ಲಿ ದಿನನಿತ್ಯ ಮಾಡುವಂತಹ ಕೆಲಸದ ಪಟ್ಟಿಯನ್ನು ಮಾಡಿ, ಆ ಕೆಲಸದ ಜವಾಬ್ದಾರಿಯನ್ನು ಮನೆಯಲ್ಲಿ ಯಾರು ನಿರ್ವಹಿಸುತ್ತಾರೆ ಎಂಬುದನ್ನು ಗುರುತಿಸಲು ಹೇಳಿ. ಅದನ್ನು ತಂದು ಆಕ್ಟಿಝೇನ್ ಕ್ಲಬ್ ಗೋಡೆಯ ಮೇಲೆ ಅಂಟಿಸಬಹುದು. ಒಂದು ವೇಳೆ ಸ್ಥಳದ ತೊಂದರೆ ಇದ್ದರೆ ಪ್ರತಿ ದಿನ ಬದಲಾಯಿಸಬಹುದು
ಶಿಕ್ಷಕರು ಪ್ರತಿಫಲನ ಹಾಳೆಗಳು, ಚಟುವಟಿಕೆ ವರದಿ ಮತ್ತು ಪ್ರತಿಕ್ರಿಯೆ ಫಾರ್ಮ್ ಅನ್ನು ಭರ್ತಿ ಮಾಡಿ ಚಟುವಟಿಕೆಯ ವರದಿಯನ್ನು ಭರ್ತಿ ಮಾಡಲು ಪದಾಧಿಕಾರಿಗಳಿಗೆ ನೆನಪಿಸಿ ಮತ್ತು ಪ್ರತಿಬಿಂಬ ಹಾಳೆಗಳನ್ನು ತುಂಬಲು ವಿದ್ಯಾರ್ಥಿಗಳಿಗೆ ನೆನಪಿಸಿ.
ಪ್ರಿಂಟ್ ವಿಭಾಗ
ಅನುಬಂಧ 1 – ಪಾತ್ರಾಭಿನಯದ (ರೋಲ್ ಪ್ಲೇ) ಸ್ಕ್ರಿಪ್ಟ್
ಶಿಕ್ಷಕರು ನಾಟಕದಲ್ಲಿನ ಪಾತ್ರಗಳನ್ನು ಅಭಿನಯಿಸಲು ವಿದ್ಯಾರ್ಥಿಗಳನ್ನು ಆರಿಸುತ್ತಾರೆ. ಅವರು ಸ್ಕ್ರಿಪ್ಟ್ ಹಂಚಿ, ತಯಾರಾಗಲು ಅವರಿಗೆ 10 ನಿಮಿಷಗಳನ್ನು ನೀಡುತ್ತಾರೆ.
ಪಾತ್ರ ಪಟ್ಟಿ:
- ಅಮ್ಮ
- ಅಪ್ಪ
- ಮಗ
- ಮಗಳು
- ಅಜ್ಜ
- ಅಜ್ಜಿ
ಹಿನ್ನೆಲೆ: ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿರುವ ದೃಶ್ಯ- ಅಮ್ಮ ತರಕಾರಿ ಹಚ್ಚಿ ಊಟದ ತಯಾರಿಯಲ್ಲಿದ್ದಾಳೆ, ಇದೇವೇಳೆ ಅವಳು ಧೂಳು, ಬಲೆಗಳನ್ನು ತೆಗೆದು ಗುಡಿಸುತ್ತಿದ್ದಾಳೆ, ಅಜ್ಜ-ಅಜ್ಜಿ ಸಂಬಂಧಿಕರ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ, ಒಂದು ಮಗು ಶೂ ಪಾಲಿಶ್ ಮಾಡಲು ಹೇಳುತ್ತಿದೆ, ಇನ್ನೊಂದು ತನ್ನ ಟಿಫಿನ್‌ಗೆ ಪಾಸ್ತಾ ಮಾಡಬೇಕೆಂದು ಹಠಹಿಡಿದಿದೆ, ತಂದೆಯು ದಿನಪತ್ರಿಕೆಯನ್ನು ಓದುತ್ತಿದ್ದಾರೆ. ಅಮ್ಮ ಮನೆಗೆಲಸವನ್ನು ಪೂರೈಸಲು ಹೆಣಗಾಡುತ್ತಿದ್ದಾಳೆ.
(ಸಂದರ್ಭವನ್ನು ಹೊಂದಿಸಲು ಶಿಕ್ಷಕರು ಹಿನ್ನೆಲೆಯನ್ನು ಓದಬಹುದು)
ಅಮ್ಮ:ನನಗೆ ಇವತ್ತು ತಡವಾಗುತ್ತಿದೆ, ಹಾಗಾಗಿ ಆಲೂಗಡ್ಡೆಯಿಂದ ಅಡುಗೆ ಮಾಡುತ್ತೇನೆ.
(ಅವಳು ತನ್ನ ಕೆಲಸವನ್ನು ಪ್ರಾರಂಭಿಸುತ್ತಾಳೆ)
ಅಜ್ಜಿ: ಮಾಲಾ, ನನಗೆ ಬಾಯಾರಿಕೆ ಆಗುತ್ತಿದೆ, ಕುಡಿಯಲು ಸ್ವಲ್ಪ ನೀರು ತಂದುಕೊಡುವೆಯಾ.
ಮಾಲಾ(ಅಮ್ಮ): ಹಾ, ಖಂಡಿತ!
(ಅಮ್ಮ, ಅಜ್ಜಿಗೆ ನೀರು ತಂದುಕೊಡುತ್ತಾಳೆ)
ಅಜ್ಜ: ಮಾಲಾ, ನಮಗೆ ಇನ್ನೊಂದು ಸ್ವಲ್ಪ ಚಹಾ ಮಾಡಿ ತರುವೆಯಾ.
ಮಾಲಾ:ಹಾ! ತರುತ್ತೇನೆ ಮಾವಾ.
ಮಾಲಾ ಅಡುಗೆಮನೆಗೆ ಹೋಗುತ್ತಾಳೆ.
ಮಾಲಾ:ಒಲೆಯಲ್ಲಿ ತರಕಾರಿ ಮತ್ತು ಬೇಳೆ ಬೇಯುತ್ತಿದೆ. ಅದನ್ನು ತೆಗೆದು ನಾನು ಚಹಾ ಮಾಡಲು ಹೊರಟರೆ ಕೆಲಸಕ್ಕೆ ಹೋಗಲು ನನಗೆ ಖಂಡಿತಾ ತಡವಾಗುತ್ತದೆ.
ಅಜ್ಜಿ:ಮಗಳೇ! ಚಹಾ ತಯಾರಾಯ್ತಾ?
ಮಾಲಾ:ಆಗ್ತಾ ಇದೆ, ಸ್ವಲ್ಪ ಹೊತ್ತು.
ಮಗ:ಅಮ್ಮ, ನನ್ನ ಟಿಫಿನ್‌ಗೆ ಇವತ್ತು ಪಾಸ್ತಾ ಹಾಕುತ್ತೀಯಾ?
ಅಮ್ಮ:ಇಲ್ಲ ಮಗನೇ! ಈ ವಾರಾಂತ್ಯದಲ್ಲಿ ನಾನು ನಿನಗೆ ಪಾಸ್ತಾ ಮಾಡಿಕೊಡುತ್ತೇನೆ. ಬೆಳಗಿನ ಹೊತ್ತು ಮತ್ತೊಂದು ತಿಂಡಿ ಮಾಡುವಷ್ಟು ಸಮಯ ಇಲ್ಲ ನನಗೆ.
ಮಗ:ಛೆ! ನೀನು ಯಾವಾಗಲೂ ಕೆಲಸದಲ್ಲಿ ಬ್ಯುಸಿ ಇರ್ತೀಯಾ.
ಮಗಳು: ಅಮ್ಮಾ! ನನ್ನ ಶೂ ಪಾಲಿಶ್ ಎಲ್ಲಿಟ್ಟಿದ್ದೀಯಾ?
ಅಮ್ಮ: ಅದು ಶೂ ರ‍್ಯಾಕ್‌ನಲ್ಲಿಯೇ ಇದೆ.
ಮಗಳು: ಆದರೆ ನನಗೆ ಅದು ಸಿಗುತ್ತಿಲ್ಲ!
ಅಮ್ಮ: (ಶೂ ರ‍್ಯಾಕ್ ಬಳಿ ಹೋಗಿ ಅದನ್ನು ಹುಡುಕಿ ಕೊಡುತ್ತಾಳೆ). ಅಲ್ಲೇ ಹಿಂದೆ ಇರುವ ಶೂ ಅಡಿಯಲ್ಲಿ ಬಿದ್ದಿತ್ತು. ಸ್ವಲ್ಪ ಹುಡುಕಿದ್ದರೆ ನಿನಗೇ ಸಿಗುತ್ತಿತ್ತು.
ಅಪ್ಪ: ಓಹ್! ಮಾಲಾ! ಬೆಳಗ್ಗೆ ಬೇಗನೆ ಏಳಲು ಪ್ರಯತ್ನಿಸು, ಇಲ್ಲದಿದ್ದರೆ ನಿನ್ನ ಕೆಲಸಗಳು ಮುಗಿಯುವುದಿಲ್ಲ.
ಅಮ್ಮ:ನಾನು ಯಾವಾಗಲೂ ಬೆಳಗ್ಗೆ 5:30 ಏಳುತ್ತಿದ್ದೇನೆ. ನೀವು ಬೆಳಗ್ಗೆ 6:30ಗೆ ಏಳುತ್ತೀರಿ. ನಾನು ಈಗಾಗಲೇ ನಿಮಗಿಂತ ಒಂದು ಗಂಟೆ ಮುಂಚಿತವಾಗಿ ಏಳುತ್ತೇನೆ.
ಅಪ್ಪ:ಹೌದಾ, ಹಾಗಾದರೆ ನಿನ್ನ ಕೆಲಸಗಳು ಮುಗಿಯಬೇಕೆಂದರೆ ನೀನು ಬೆಳಗ್ಗೆ 5:00 ಗಂಟೆಗೆ ಏಳಬೇಕು ಅನಿಸುತ್ತೆ ನನಗೆ.
ಎಲ್ಲರೂ (ಮಗಳನ್ನು ಹೊರತುಪಡಿಸಿ): ಹೌದು! ನೀನು ಬೇಗನೆ ಏಳಬೇಕು!
(ಅಮ್ಮನ ಮುಖದಲ್ಲಿ ಬೇಜಾರು ಕಾಣುತ್ತದೆ)
ಮಗಳು:ಯಾಕೆ ಅವಳು ಮಾತ್ರ ಬೇಗನೇ ಏಳಬೇಕು? ನಾವೆಲ್ಲರೂ ಮಾಮೂಲಿ ಸಮಯಕ್ಕಿಂತ ಕೇವಲ 10 ನಿಮಿಷ ಮುಂಚಿತವಾಗಿ ಎದ್ದು ಅಮ್ಮನಿಗೆ ನೆರವಾದರೆ! ಅವಳಿಗೆ ಎಷ್ಟೋ ಸಮಯ ಉಳಿತಾಯವಾಗಬಹುದು. ಅವಳು ಕಷ್ಟಪಡಬೇಕಾಗಿ ಬರುವುದಿಲ್ಲ. ಮನೆಗೆಲಸವನ್ನು ಮಾಡುವುದು ಕೇವಲ ಅವಳು ಮಾತ್ರ ಮಾಡುವ ಕೆಲಸವಲ್ಲ! ಕುಟುಂಬದ ಸದಸ್ಯರೆಲ್ಲರೂ ಕೆಲಸವನ್ನು ಹಂಚಿಕೊಳ್ಳಬೇಕು. ಆಕ್ಟಿಝೆನ್ಸ್ ಕ್ಲಬ್‌ನಲ್ಲಿ ನನ್ನ ಶಿಕ್ಷಕರು ನನಗೆ ಇದನ್ನು ಹೇಳಿಕೊಟ್ಟಿದ್ದಾರೆ.
ಅಜ್ಜಿ:ಹೌದು ನೀನು ಹೇಳುವುದು ಸರಿ! ನಾಳೆಯಿಂದ ನಾವೆಲ್ಲರೂ ಪ್ರಯತ್ನಿಸೋಣ.
ಮರುದಿನ -(ಪ್ರತಿಯೊಬ್ಬರೂ ಮಾಮೂಲಿಗಿಂತ 10 ನಿಮಿಷ ಬೇಗನೆ ಏಳುತ್ತಾರೆ)
ಅಜ್ಜಿ:ಸೊಸೆ, ನಾನು ನಿನಗೆ ತರಕಾರಿ ಹಚ್ಚಿ ಕೊಡುತ್ತೇನೆ.
ಅಪ್ಪ:ನಾನು ಗಿಡಗಳಿಗೆ ನೀರು ಹಾಕುತ್ತೇನೆ.
ಮಕ್ಕಳು:ನಾವು ಅಜ್ಜ-ಅಜ್ಜಿಗೆ ನೀರು ಇತ್ಯಾದಿ ತಂದುಕೊಟ್ಟು, ನಮ್ಮ ಶಾಲೆ ಬ್ಯಾಗುಗಳನ್ನು ನಾವೇ ಸಿದ್ಧಪಡಿಸಿಕೊಂಡು ಶಾಲೆಗೆ ಹೊರಡುತ್ತೇವೆ.
ಅಜ್ಜ:ನಾನು ಮಕ್ಕಳನ್ನು ಸ್ಕೂಲ್ ಬಸ್ಸಿಗೆ ಹತ್ತಿಸಿ ಬರುತ್ತೇನೆ.
ಎಲ್ಲರೂ ಸಹಾಯ ಮಾಡಲು ಪ್ರಾರಂಭಿಸುತ್ತಾರೆ,
ಎಲ್ಲ ಕೆಲಸಗಳೂ ಸುಸೂತ್ರವಾಗಿ ನಡೆಯುತ್ತವೆ.
ಅಮ್ಮ:ಇನ್ನೂ 9:00 ಗಂಟೆ ಆಗಿದೆಯಷ್ಟೆ, ನನ್ನ ಕೆಲಸಗಳೆಲ್ಲವೂ ಮುಗಿದವು! ಇವತ್ತು ನನಗೆ ಹೆಚ್ಚು ಸಮಯ ಸಿಕ್ಕಿದೆ! ನಾವು ಇನ್ನೂ ಒಂದು ಚಹಾ ಮಾಡಿ ಎಲ್ಲರೂ ಒಟ್ಟಿಗೆ ಕುಡಿಯೋಣ.