KLE ಕನ್ನಡ ಗ್ರೇಡ್ 6 ಸೆಪ್ಟೆಂಬರ್ ಚಟುವಟಿಕೆ-ಪ್ರಜಾಪ್ರಭುತ್ವ ಧ್ವನಿಗಳು ಮತ್ತು ಆಯ್ಕೆಗಳು
ಉದ್ದೇಶಗಳು
ಮನೆಯಲ್ಲಿ ದೈನಂದಿನ ಜೀವನ ಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವವನ್ನು ತಿಳಿದುಕೊಳ್ಳುವುದು.
ಕೌಶಲ್ಯಗಳು
ಸಂವಹನ, ಸಹಭಾಗಿತ್ವ
ಮೌಲ್ಯಗಳು
ಅಭಿಪ್ರಾಯಗಳನ್ನು ಗೌರವಿಸುವುದು
ಬೇಕಾದ ಸಾಮಗ್ರಿಗಳು
ನೋಟ್‌ಬುಕ್ ಮತ್ತು ಪೆನ್‌ಗಳು
ಚಟುವಟಿಕೆ-ಪೂರ್ವ ಸಿದ್ಧತೆ
- ಕಿರುನಾಟಕ – ಸಂಭಾಷಣೆಗಳು ಅನುಬಂಧದಿಂದ ಶಿಕ್ಷಕರು ನೀಡಿದ ಪುಟದಲ್ಲಿ ಸಂಭಾಷಣೆಗಳನ್ನು ಬರೆಯಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಹೇಳಿ
- ಶಿಕ್ಷಕರು 12 ವಿದ್ಯಾರ್ಥಿಗಳನ್ನು ಆರಿಸಿ ಸ್ಕ್ರಿಪ್ಟ್‌ನಲ್ಲಿರುವಂತೆ ಪಾತ್ರಗಳನ್ನು ನಿಯೋಜಿಸುತ್ತಾರೆ. (ಪದಾಧಿಕಾರಿಗಳು ನಿರೂಪಕರಾಗಬಹುದು(ಐಚ್ಛಿಕ), ಅವರು ದೃಶ್ಯವನ್ನು ಪರಿಚಯಿಸಿದ ನಂತರ ಒಂದೊಂದೇ ಗುಂಪನ್ನು ಆಹ್ವಾನಿಸುತ್ತಾರೆ)
- ವಿದ್ಯಾರ್ಥಿಗಳಿಗೆ ಸಂಭಾಷಣೆಗಳನ್ನು ಹಂಚಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಕೇಳಿ ಮತ್ತು ಚಟುವಟಿಕೆ ಇರುವ ದಿನ ಅವರ ಸಂಭಾಷಣೆಯನ್ನು ಪರಿಶೀಲೀಸಲು ಹೇಳಿ. ಅಲ್ಲದೇ ಅವರು ನಿರೂಪಕರ ಭಾಗವನ್ನೂ ಕಲಿಯಬೇಕು.
- ಚಟುವಟಿಕೆ ಪೂರ್ವ ಸಿದ್ಧತೆಯನ್ನು ಮುಖ್ಯ ಚಟುವಟಿಕೆಯ 2 ದಿನಗಳೊಳಗೆ ಪೂರ್ತಿಗೊಳಿಸಬೇಕೆಂದು ತಿಳಿಸಿ.
ಮುಖ್ಯ ಚಟುವಟಿಕೆ – ಕಿರು ನಾಟಕ
ಬೇಕಾದ ಅಂದಾಜು ಸಮಯ: 30 ನಿಮಿಷಗಳು
1. ಇವತ್ತು ನಾವು ಕಿರುನಾಟಕದ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ತಿಳಿದುಕೊಳ್ಳಲಿದ್ದೇವೆ.
2. ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಕಿರುನಾಟಕವನ್ನು ಒಬ್ಬೊಬ್ಬರಾಗಿ ಪ್ರಸ್ತುತಪಡಿಸಲು ಹೇಳುತ್ತಾರೆ.
3. ಎಲ್ಲಾ ಗುಂಪುಗಳು ತಮ್ಮ ಕಿರುನಾಟಕವನ್ನು ಪ್ರಸ್ತುತಪಡಿಸಿದ ನಂತರ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ.
- ಇತರರ ಅಭಿಪ್ರಾಯಗಳಿಗೂ ಮನ್ನಣೆ ನೀಡಲಾಗುತ್ತದೆ ಎಂಬುದನ್ನು ನೀವು ಯಾವ ಪರಿಸ್ಥಿತಿಯಲ್ಲಿ ನೋಡಲು ಸಾಧ್ಯವಾಗಿತ್ತು?
- ನಿಮ್ಮ ಪ್ರಕಾರ, ಯಾವ ಪರಿಸ್ಥಿತಿಯು ಪ್ರಜಾಪ್ರಭುತ್ವವನ್ನು ತೋರಿಸುತ್ತದೆ (ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಇನ್ನೊಬ್ಬರ ಎದುರಿಗೆ ಹೇಳುವ ಸಮಾನ ಅವಕಾಶ) ಮತ್ತು ಯಾವುದರಲ್ಲಿ ಅದು ಇರಲಿಲ್ಲ?
- ನಮ್ಮ ಪದಾಧಿಕಾರಿಗಳನ್ನು ನಾವು ಹೇಗೆ ಆಯ್ಕೆ ಮಾಡಿದೆವು ಮತ್ತು ಇದು ಪ್ರಜಾಪ್ರಭುತ್ವವನ್ನು ತೋರಿಸಿದೆಯೇ?
- ನಿಮ್ಮ ಮನೆಯಲ್ಲಿ ಅಥವಾ ಕಿರುನಾಟಕವನ್ನು ಆಧರಿಸಿ ನಿಮ್ಮ ಅನುಭವಕ್ಕೆ ಬಂದಂತಹ ಪ್ರಜಾಪ್ರಭುತ್ವದ ಕೆಲವು ಉದಾಹರಣೆಗಳನ್ನು ನೀಡಿ?
ಚಟುವಟಿಕೆಯ ಮುಕ್ತಾಯ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಚಟುವಟಿಕೆಯನ್ನು (ಹೌದು-ಅಲ್ಲ ಆಟ) ಮುಕ್ತಾಯಗೊಳಿಸಲು ಶಿಕ್ಷಕರು ಪದಾಧಿಕಾರಿಗಳಿಗೆ ನೆರವಾಗುತ್ತಾರೆ.
ಪದಾಧಿಕಾರಿಗಳು ವಾಕ್ಯವನ್ನು ಓದಿ ಹೇಳುತ್ತಾರೆ. ಇದು ಪ್ರಜಾಪ್ರಭುತ್ವವನ್ನು ತೋರಿಸಿದರೆ, ವಿದ್ಯಾರ್ಥಿಗಳು ಹೌದು ಎನ್ನುತ್ತಾರೆ, ಇಲ್ಲದಿದ್ದರೆ, ಇಲ್ಲ ಎಂದು ಹೇಳುತ್ತಾರೆ.
- ತರಗತಿಯಲ್ಲಿ ಗದ್ದಲ ಕಡಿಮೆಯಾಗುತ್ತದೆ.
- ಸ್ನೇಹಿತರು ಪರಸ್ಪರ ಮಾತನಾಡಿಕೊಳ್ಳುತ್ತಾರೆ “ಯಾವ ಆಟವನ್ನು ಆಡವುದು ಎಂದು ನಿರ್ಧರಿಸಲು ನಾವು ಮತ ಚಲಾಯಿಸೋಣ”.
- ತರಗತಿಯ ಪದಾಧಿಕಾರಿಗಳು/ಮೇಲ್ವಿಚಾರಕರನ್ನು ನಾಮನಿರ್ದೇಶನ ಮಾಡುವಾಗ ವಿದ್ಯಾರ್ಥಿಗಳು ಒಬ್ಬರ ಮಾತನ್ನು ಇನ್ನೊಬ್ಬರು ಕೇಳುವುದಿಲ್ಲ.
- ನಿಮ್ಮ ಸಹೋದರ ಪ್ರತಿ ದಿನವೂ ನೀವು ಇಷ್ಟಪಡದಿರುವ ಆಟವನ್ನು ಆಡಲು ಆಯ್ಕೆ ಮಾಡುತ್ತಾನೆ.
- ಭಾನುವಾರದ ಊಟವನ್ನು ನೀವು ಮತ್ತು ನಿಮ್ಮ ಸಹೋದರ ಜೊತೆಯಾಗಿ ನಿರ್ಧರಿಸುತ್ತೀರಿ. .
- ಒಂದು ಕಥೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ತರಗತಿಯ ಪ್ರತಿಯೊಬ್ಬರಿಗೂ ಅವಕಾಶ ದೊರೆಯುತ್ತದೆ.
- ನಾಲ್ಕು ಸ್ನೇಹಿತರು ಆಟದ ಸಮಯ ನಿರ್ಧರಿಸಲು ಮತ್ತು ಎಲ್ಲರಿಗೂ ಹೊಂದಿಕೆಯಾಗುವ ಸಮಯವನ್ನು ಆಯ್ಕೆ ಮಾಡಲು ತಮ್ಮ ಅಭಿಪ್ರಾಯವನ್ನು ಪರಸ್ಪರ ಆಲಿಸುತ್ತಾರೆ.
- ನೀವು ಮತ್ತು ನಿಮ್ಮ ಸಹೋದರಿ ಸಾಕುಪ್ರಾಣಿಯ ಕುರಿತು ಮೂರು ಆಯ್ಕೆಗಳನ್ನು ಪರಸ್ಪರ ಹಂಚಿಕೊಂಡು ಒಂದನ್ನು ನಿರ್ಧರಿಸುತ್ತೀರಿ.
ವಿದ್ಯಾರ್ಥಿಗಳಲ್ಲಿ, ದೈನಂದಿನ ಜೀವನದಲ್ಲಿ ತಮಗೆ ಕಂಡಂತೆ ಪ್ರಜಾಪ್ರಭುತ್ವವನ್ನು ಪ್ರದರ್ಶಿಸುವ ಯಾವುದೇ ಉದಾಹರಣೆಗಳಿವೆಯೇ ಎಂದು ಕೇಳಿ.
ಶಿಕ್ಷಕರು ಚರ್ಚೆಗಳನ್ನು ಆಧರಿಸಿ ಪ್ರಮುಖ ಕಲಿಕಾ ವಿಷಯಗಳನ್ನು ಮುಕ್ತಾಯಗೊಳಿಸುತ್ತಾರೆ.
- ಪ್ರಜಾಪ್ರಭುತ್ವದಲ್ಲಿ, ಪರಸ್ಪರರ ಅಭಿಪ್ರಾಯಗಳನ್ನು ಆಲಿಸುವುದು ಮುಖ್ಯ.
- ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ನೀಡುವುದು ಮತ್ತು ಮತ ಚಲಾಯಿಸುವುದು ಇತ್ಯಾದಿಗಳ ಮೂಲಕ ನಾವು ಜೊತೆಯಾಗಿ ನಿರ್ಧರಿಸಬಹುದು.
- ಪ್ರಜಾಪ್ರಭುತ್ವ ಎಂದರೆ ಜೊತೆಯಾಗಿ ಕೆಲಸ ಮಾಡುವುದು, ಪರಸ್ಪರರ ಮಾತುಗಳನ್ನು ಆಲಿಸುವುದು, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಪರಸ್ಪರ ಗೌರವಿಸುವುದು ಇತ್ಯಾದಿ.
ದೇಶ್ ಅಪ್ನಾಯೇ ಫಲಕ (DA ಗೋಡೆ)
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ಕಿರುನಾಟಕದ ಸ್ಕ್ರಿಪ್ಟ್
- ಯಾವುದೇ 4-5 ವಿದ್ಯಾರ್ಥಿಗಳಿಂದ ತಾವು ಪ್ರಜಾಪ್ರಭುತ್ವವನ್ನು ಹೇಗೆ ಆಚರಿಸುತ್ತೇವೆ ಎಂಬುದರ ತಮ್ಮ ನೈಜ ಜೀವನದ ಅನುಭವ/ಉದಾರಹಣೆಯನ್ನು ಹಂಚಿಕೊಳ್ಳಲು ಬಯಸುತ್ತಿದ್ದರೆ ಅವಕಾಶ ನೀಡುವುದು.
- ಪ್ರಜಾಪ್ರಭುತ್ವದ ಕೋಟ್‌ಗಳು
ಸೆಶನ್ ಮುಗಿದ ನಂತರ, ಪದಾಧಿಕಾರಿಗಳು ಪ್ರತಿಫಲನ ಹಾಳೆಯನ್ನು ಭರ್ತಿ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳುತ್ತಾರೆ. ಪದಾಧಿಕಾರಿಗಳು, ಕನಿಷ್ಠ 5 ವಿದ್ಯಾರ್ಥಿಗಳು ಪ್ರತಿಫಲನ ಹಾಳೆಯನ್ನು ಭರ್ತಿ ಮಾಡಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಗಮನಿಸಬೇಕಾದ ಅಂಶ(ಚಟುವಟಿಕೆಯಲ್ಲಿ ಮಾಡಬೇಕಾದ್ದು ಮತ್ತು ಮಾಡಬಾರದ್ದು)
1. ಕಿರುನಾಟಕದ ಸಿದ್ಧತೆಯ ಸಮಯವನ್ನು ಸೀಮಿತಗೊಳಿಸಿ. ಕಿರುನಾಟಕಕ್ಕೆ ವೇಷಭೂಷಣದ ಅಗತ್ಯವಿಲ್ಲ.
2. ಕಿರುನಾಟಕಕ್ಕೆ ದೀರ್ಘ ಸಿದ್ಧತೆಯನ್ನು ಮಾಡದಿರಿ, ಇಲ್ಲಿ ಅನುಭವದ ಮೂಲಕ ಕಲಿಕೆಯ ಕುರಿತು ಕೇಂದ್ರೀಕರಿಸಲಾಗುತ್ತದೆ.
3. ಚಟುವಟಿಕೆಯ ಫೋಟೋಗಳನ್ನು ಹಂಚಿಕೊಳ್ಳುವುದು:
- ಚಟುವಟಿಕೆ ಫೋಟೋಗಳಲ್ಲಿ ಕಿರು ನಾಟಕ
- ಪದಾಧಿಕಾರಿ ವಿವರಣೆ ನೀಡುತ್ತಿರುವುದು.
- ದೇಶ್ ಅಪ್ನಾಯೇ ಭಿತ್ತಿ ಪತ್ರಗಳು
ಉಲ್ಲೇಖ ವಿಭಾಗ
ನಿರೂಪಕರು ಎಲ್ಲಾ ಗುಂಪನ್ನು ಒಂದೊಂದಾಗಿ ಸ್ವಾಗತಿಸಿ ದೃಶ್ಯವನ್ನು ಸಂಕ್ಷಿಪ್ತವಾಗಿ ಮಾತನಾಡಲು ಹೇಳುತ್ತಾರೆ.
ದೃಶ್ಯ 1 – ಮನು ಮತ್ತು ಮೀರಾ ಒಡಹುಟ್ಟಿದವರು. ಮನು ತಮ್ಮನಾದರೆ ಮೀರಾ ಅಕ್ಕ.
ಮನು – ಅಕ್ಕಾ ನಾವಿಂದು ಬೇರೆ ಆಟ ಆಡೋಣ, ನನಗೆ ಕ್ರಿಕೆಟ್ ಆಡಲು ಇಷ್ಟವಿಲ್ಲ.
ಮೀರಾ – ನನಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ, ಆದ್ದರಿಂದ ಯಾವಾಗಿನಂತೆ ನಾವು ಕ್ರಿಕೆಟ್ ಅನ್ನೇ ಆಡೋಣ.
ಮನು ಬೇಸರದಿಂದ ಮೀರಾಳೊಡನೆ ಕ್ರಿಕೆಟ್ ಆಡಲು ಪ್ರಾರಂಭಿಸುತ್ತಾನೆ.
ದೃಶ್ಯ 2 ಶೀತಲ್ ಮತ್ತು ರೀಟಾ ಒಡಹುಟ್ಟಿದವರು ಮತ್ತು ಅವರು ತಮ್ಮ ಅಜ್ಜ ಅಜ್ಜಿಯ ಮನೆಗೆ ಭೇಟಿನೀಡುತ್ತಾರೆ, ಅಲ್ಲಿ ಟಿವಿ ಇರುತ್ತದೆ. ಅವರು ಟಿವಿಯಲ್ಲಿ ತಮ್ಮ ನೆಚ್ಚಿನ ಕಾರ್ಯಕ್ರಮ ನೋಡಲು ಜಗಳವಾಡುತ್ತಿದ್ದಾರೆ.
ಶೀತಲ್ - ನನಗೆ ಟಿವಿಯಲ್ಲಿ ಕಾರ್ಟೂನ್ ನೋಡಲು ಇಷ್ಟ, ನಾವಿಬ್ಬರೂ ಅದನ್ನೇ ನೋಡೋಣ.
ರೀಟಾ- ಆದರೆ ನನಗೆ ಟಿವಿಯಲ್ಲಿ ಸಿನಿಮಾ ನೋಡಲು ಇಷ್ಟ.
ಶೀತಲ್ - ಹಾಗಾದರೆ ನಾವು ಅರ್ಧ ಗಂಟೆ ಟಿವಿಯಲ್ಲಿ ಕಾರ್ಟೂನ್ ನೋಡೋಣ ನಂತರ ಒಟ್ಟಿಗೆ ಸಿನಿಮಾ ನೋಡೋಣ.
ಇಬ್ಬರೂ ಸಂತೋಷದಿಂದ ಒಟ್ಟಿಗೆ ಟಿವಿ ನೋಡಲು ನಿರ್ಧರಿಸುತ್ತಾರೆ.
ದೃಶ್ಯ 3 ದಿನೇಶ್ ಮತ್ತು ಡಾಲಿ ಸಂಜೆ ತಮ್ಮ ಹೋಮ್‌ವರ್ಕ್‌ಗಳನ್ನು ಮುಗಿಸುತ್ತಿರುತ್ತಾರೆ. ಅದು ಮುಗಿದ ನಂತರ ಇಬ್ಬರೂ ಕೇಳಿದರು -
ದಿನೇಶ್ ಮತ್ತು ಡಾಲಿ –ನಮ್ಮ ಹೋಮ್‌ವರ್ಕ್ ಮತ್ತು ಎಲ್ಲಾ ಕೆಲಸಗಳು ಮುಗಿದಿವೆ. ನಾವು ಹೊರಗೆ ಹೋಗಿ ಆಡಬಹುದೇ?
ತಾಯಿ – ಇಲ್ಲ, ಡಾಲಿ ಮಾತ್ರ ಆಟವಾಡಲು ಹೋಗುತ್ತಾಳೆ; ನೀನು ನಿನ್ನ ತಂದೆಯ ಕೆಲಸಗಳಿಗೆ ಸಹಾಯ ಮಾಡಬೇಕು. ಮುಂದೆ ಯಾವುದೇ ಪ್ರಶ್ನೆ ಇಲ್ಲ.
ಡಾಲಿ ಖುಷಿಯಿಂದ ಹೊರಗೆ ಹೋಗುತ್ತಾಳೆ ಮತ್ತು ದಿನೇಶ್ ಬೇಸರದಿಂದ ತನ್ನ ತಂದೆಗೆ ಸಹಾಯಮಾಡಲು ಹೋಗುತ್ತಾನೆ.
ದೃಶ್ಯ 4 ಅಮಿ ಮತ್ತು ಯಶ್ ತಮ್ಮ ಕುಟುಂಬದೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಾರೆ. ಭಾನುವಾರದಂದು ನೆರೆಮನೆಯವರು ಅವರನ್ನು ಊಟಕ್ಕೆ ಆಹ್ವಾನಿಸಿದರು. ಆದರೆ ಮಕ್ಕಳು ರಜಾದಿನದಂದು ತಮ್ಮ ಗೆಳೆಯರೊಡನೆ ಪಾರ್ಕ್‌ನಲ್ಲಿ ಆಟವಾಡಲು ಬಯಸಿದ್ದರಿಂದ ಅಲ್ಲಿಗೆ ಹೋಗಲು ಸಿದ್ಧರಿಲ್ಲ. ಅವರು ತಮ್ಮ ತಾಯಿಯೊಡನೆ ಇದನ್ನು ಚರ್ಚಿಸಿ ಪರಿಹಾರ ಕೇಳಿದರು.
ತಾಯಿಯು ತಂದೆಗೆ – ಅಮಿ ಮತ್ತು ಯಶ್ ಇವತ್ತು ತಮ್ಮ ಗೆಳೆಯರೊಡನೆ ಪಾರ್ಕ್‌ನಲ್ಲಿ ಆಟವಾಡಲು ಬಯಸುತ್ತಿದ್ದಾರೆ, ಅವರು ಊಟಕ್ಕೆ ನೆರೆಮನೆಗೆ ಹೋಗಲು ಇಷ್ಟವಿಲ್ಲ. ನಾವೇನು ಮಾಡೋಣ?
ತಂದೆ ಮಕ್ಕಳನ್ನು ಕರೆದು ಹೇಳುತ್ತಾರೆ – ನೀವು ಮೊದಲಿಗೆ ಪಾರ್ಕ್‌ಗೆ ಹೋಗಿ ಒಂದು ಗಂಟೆ ಆಟವಾಡಬಹುದು ನಂತರ ನಾನು ಮತ್ತು ನಿಮ್ಮ ತಾಯಿ ನೆರೆಮನೆಗೆ ಹೋಗುತ್ತೇವೆ. ನಂತರ ನೀವಿಬ್ಬರು ನಮ್ಮೊಂದಿಗೆ ಊಟಕ್ಕೆ ಬರಬಹುದು. ಸಂಜೆ ಮತ್ತೆ ನಾವೆಲ್ಲಾ ಪಾರ್ಕ್‌ಗೆ ಹೋಗೋಣ.